ತೊಣ್ಣೂರು -
ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ ಪಾಂಡವಪುರ ತಾಲ್ಲೂಕಿನಲ್ಲಿ ಪಾಂಡವಪುರ ತಾಲ್ಲೂಕಿನಲ್ಲಿ ಪಾಂಡವಪುರ ಪಟ್ಟಣಕ್ಕೆ 9 ಕಿಮೀ. ದೂರದಲ್ಲಿರುವ ಒಂದು ಹಳ್ಳಿ.. ಹೊಯ್ಸಳರ ಕಾಲದಲ್ಲಿ ಪ್ರಸಿದ್ಧವಾದ ಅಗ್ರಹಾರವಾಗಿ ಬೆಳೆಯಿತು.  ತೊಂಡನೂರು, ತೊಂಡನೂರಗ್ರಹಾರ, ಯಾದವಪುರ, ಯಾದವನಾರಾಯಣ ಚತುರ್ವೇದಿಮಂಗಲ ಎಂದು ಮುಂತಾಗಿ ಶಾಸನಗಳಲ್ಲಿ ಈ ಊರನ್ನು ಹೆಸರಿಸಿದೆ.  ವಿಷ್ಣುವರ್ಧನನ ತಾಯಿ ಮೊದಲ ಮಹಾದೇವಿ ಈ ಊರಿನಲ್ಲಿ ತುಪ್ಪಲೇಶ್ವರವೆಂಬ ಶಿವದೇವಾಲಯವೊಂದನ್ನು ಕಟ್ಟಿಸಿದಳೆಂದೂ ಅದಕ್ಕೆ ವಿಷ್ಣುವರ್ಧನ ದತ್ತಿ ಬಿಟ್ಟಿದ್ದುದಾಗಿಯೂ ತಿಳಿದುಬರುತ್ತದೆ.  ವಿಷ್ಣುವರ್ಧನ ಯುವರಾಜನಾಗಿದ್ದಾಗ ಬಹುಶ: ಇಲ್ಲಿಂದ ರಾಜ್ಯಭಾರ ಮಾಡುತ್ತಿದ್ದ.  ಅವನು ಇದನ್ನು ಅಗ್ರಹಾರವಾಗಿ ಪರಿವರ್ತಿಸಿದ.  ಬಹುಶ: ಅವನು ನಿರ್ಮಿಸಿದ ಪಂಚನಾರಾಯಣ ದೇವಾಲಯಗಳಲ್ಲಿ ಇಲ್ಲಿಯ ಲಕ್ಷ್ಮೀನಾರಾಯಣ ದೇವಾಲಯವೂ ಒಂದಾಗಿರಬೇಕು.  ರಾಮಾನುಜಾಚಾರ್ಯರು ವಿಷ್ಣುವರ್ಧನನನ್ನು ಸಂಧಿಸಿ ಅವನನ್ನು ಜೈನಮತದಿಂದ ವೈಷ್ಣವಮತಕ್ಕೆ ಮತಾಂತರಗೊಳಿಸಿದುದು ಇಲ್ಲಿಯೇ ಎಂಬ ಒಂದು ಐತಿಹ್ಯವಿದೆ.  ಒಂದನೆಯ ನರಸಿಂಹನ ಕಾಲದಲ್ಲಿ ಕೃಷ್ಣನ ದೇವಾಲಯವನ್ನೂ ಬಹುಶ: ಕೈಲಾಸೇಶ್ವರ ದೇವಾಲಯವನ್ನೂ ಇಲ್ಲಿ ನಿರ್ಮಿಸಲಾಯಿತು. ಅಲ್ಲದೆ ನರಸಿಂಹನ ದೇವಾಲಯವೂ ಈ ಕಾಲದಲ್ಲಿಯೇ ನಿರ್ಮಿಸಿರಬಹುದಾದ ಕಟ್ಟಡ. ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ದೇವಾಲಯಗಳನ್ನು ವಿಸ್ತರಿಸಲಾಯಿತು. ಮುಂದೆ ಹೊಯ್ಸಳ ರಾಜ್ಯದ ಕೊನೆಗಾಲದಲ್ಲಿ ಮುಮ್ಮಡಿ ಬಲ್ಲಾಳ ಸ್ವಲ್ಪ ಕಾಲ ಇಲ್ಲಿ ತಂಗಿದ್ದನೆಂಬ ಹೇಳಿಕೆಯೂ ಉಂಟು.  ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲೂ ಇಲ್ಲಿಯ ದೇವಾಲಯಗಳಿಗೆ ಪಾತಾಳಾಂಕಣವೇ ಮೊದಲಾದ ಭಾಗಗಳನ್ನು ಸೇರಿಸಲಾಗಿದೆ.

ಹೊಯ್ಸಳರ ಕಾಲದಲ್ಲಿ ಕರ್ನಾಟಕದ ದಕ್ಷಿಣಭಾಗದಲ್ಲಿ ನಿರ್ಮಿತವಾದ ದ್ರಾವಿಡ ಶೈಲಿಯ ದೇವಾಲಯಗಳಿಗೆ ಇಲ್ಲಿಯ ದೇವಾಲಯಗಳು ಮಾದರಿಗಳಾಗಿವೆ.  ಗರ್ಭಗೃಹ, ಸುಕನಾಸಿ ಮತ್ತು ನವರಂಗಗಳನ್ನುಳ್ಳ ಲಕ್ಷ್ಮೀನಾರಾಯಣನ ಮೂಲ ಗುಡಿಯ ಗೋಡೆಗಳನ್ನು ದಪ್ಪ ಗ್ರಾನೈಟ್ ಕಲ್ಲುಗಳಿಂದ ಕಟ್ಟಲಾಗಿದೆ.  ಹೊರ ಗೋಡೆಗಳಲ್ಲಿ ಚೌಕ ಅರೆಗಂಬಗಳೂ ಆಳವಿಲ್ಲದ ಗೂಡುಗಳೂ ಮೇಲೆ ಪಿರಮಿಡಾಕೃತಿಯ ಅರೆಗೋಪುರಗಳೂ ಇವೆ; ಬುಡದಲ್ಲಿ ಅಷ್ಟಕೋನಾಕೃತಿಯ ಅಥವಾ ದುಂಡಾದ ದಿಂಡುಗಳಿವೆ.  ನವರಂಗದಲ್ಲಿ ತಿರುಗಣೆಯಲ್ಲಿ ಕಡೆದು ಹೊಳಪುಕೊಟ್ಟು ಮಾಡಿರುವ ಹೊಯ್ಸಳ ರೀತಿಯ ಬಳಪದಕಲ್ಲಿನ ಕಂಬಗಳಿವೆ.  ಇವು ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗದ ಕಂಬಗಳಂತಿವೆ.  ದ್ರಾವಿಡ ಹೊಯ್ಸಳ ಶೈಲಿಗಳ ಮಿಶ್ರÀಣವನ್ನು ಈ ದೇವಾಲಯದಲ್ಲಿ ಕಾಣಬಹುದು. ಮುಂದೆ ಇರುವ ದೊಡ್ಡದಾದ ಮುಖಮಂಟಪ ಮತ್ತು ಪಾತಾಳಾಂಕಣಗಳು, ಸುತ್ತಲೂ ಎತ್ತರವಾಗಿ ನಿರ್ಮಿತವಾಗಿರುವ ಎರಡು ಸುತ್ತು ಪ್ರಾಕಾರಗಳು ವಿಜಯನಗರ ಮತ್ತು ಮೈಸೂರರಸರ ಕಾಲದವು.  ಮೂಲ ದೇವಾಲಯದ ಪಕ್ಕದಲ್ಲಿಯೇ ಇರುವ ಲಕ್ಷ್ಮೀದೇವಿಯ ಗುಡಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಸುರಿಗೆಯ ನಾಗಯ್ಯನೆಂಬ ದಂಡನಾಯಕ ಕಟ್ಟಿಸಿದುದಾಗಿ ಶಾಸನವೊಂದರಿಂದ ತಿಳಿದುಬರುತ್ತದೆ.  ಕೃಷ್ಣನ ಮತ್ತು ಕೈಲಾಸೇಶ್ವರನ ದೇವಾಲಯಗಳೂ ದೊಡ್ಡವು.  ಕೃಷ್ಣನ ದೇವಾಲಯದ ಉನ್ನತವಾದ ಪ್ರಾಕಾರದ ಆಚೆ ಬೇರೆಯಾಗಿ ದೊಡ್ಡದಾದ ಪ್ರವೇಶದ್ವಾರವೊಂದಿದೆ.  ಅದಕ್ಕೆ ವೀರಬಲ್ಲಾಳನ ಗೋಪುರ ಎಂಬ ಹೆಸರಿದೆ.  ಅದು ಬಲ್ಲಾಳನ ಕಾಲದಲ್ಲಿ ನಿರ್ಮಿಸಿದ್ದಿರಬಹುದು.  ಆ ದೇವಾಲಯದಲ್ಲಿ ಸುಖಾಸೀನನಾದ ಕೃಷ್ಣನ ದೊಡ್ಡ ಮೂರ್ತಿ, ಇಕ್ಕೆಲಗಳಲ್ಲಿ ನಿಂತಿರುವ ರುಕ್ಮಿಣಿ ಸತ್ಯಭಾಮೆಯರ ಮೂರ್ತಿಗಳೊಡನೆ ಕೂಡಿ, ಗಂಭೀರವಾಗಿ ಸುಂದರವಾಗಿದೆ.  ಇಲ್ಲಿಯ ವೇಣುಗೋಪಾಲ ರುಕ್ಮಿಣಿ ಸತ್ಯಭಾಮೆಯರ ಲೋಹದ ಉತ್ಸವ ಮೂರ್ತಿಗಳೂ ಆಕರ್ಷಕವಾಗಿವೆ.  ಇವು ವಿಜಯನಗರದ ಕಾಲದವು.  ಶಿಥಿಲವಾಗಿರುವ ಕೈಲಾಸೇಶ್ವರ ದೇವಾಲಯದ ಗೋಡೆಗಳ ಮೇಲೂ ದಿಂಡುಕಲ್ಲುಗಳ ಮೇಲೂ ಹಲವು ತಮಿಳು ಶಾಸನಗಳಿವೆ.  ನರಸಿಂಹ ದೇವಾಲಯದಲ್ಲಿ ಯೋಗಾನರಸಿಂಹ ಮೂರ್ತಿಯಿದೆ.  ಈ ದೇವಾಲಯದ ನವರಂಗದ ಮೂಲೆಯೊಂದರಲ್ಲಿ ರಾಮಾನುಜಾಚಾರ್ಯರ ಗಚ್ಚಿನ ಮೂರ್ತಿಯೊಂದಿದೆ.  ಆ ಸ್ಥಳದಲ್ಲಿ ಅವರು ಜೈನರೊಂದಿಗೆ ವಾದಮಾಡಿದರೆಂದು ಹೇಳಲಾಗಿದೆ.

ಈ ಊರಿಗೆ ಹೊಂದಿಕೊಂಡಂತೆ ಭವ್ಯವಾದ ತುಂಬುಕೆರೆಯಿದೆ.  ಹೊಯ್ಸಳರ ಕಾಲದಲ್ಲಿಯೇ ನಿರ್ಮಿತವಾಗಿದ್ದ ಯಾದವಸಮುದ್ರವೇ ಇದಾಗಿರಬೇಕು.  ಟೀಪು ಸುಲ್ತಾನನ ಕಾಲದಲ್ಲಿ ಈ ಕೆರೆಯ ಜೀರ್ಣೋದ್ಧಾರವಾಯಿತೆಂದು ಹೇಳಲಾಗಿದೆ.  ಆಗ ಇದರ ಕಟ್ಟೆಗೆ ದೇವಾಲಯಗಳ ಹಲವಾರು ಶಿಲ್ಪಗಳನ್ನೂ ಕಟ್ಟಡದ ಭಾಗಗಳನ್ನೂ ಸೇರಿಸಲಾಗಿದೆ. ಅಲ್ಲಿ ಇನ್ನೂ ಕೆಲವು ದೇವಾಲಯಗಳಿದ್ದುವೆಂಬುದನ್ನೂ ಕಾಲಕ್ರಮದಲ್ಲಿ ಅವು ನಾಶವಾದುದನ್ನೂ ಇದು ಸೂಚಿಸುತ್ತದೆ.  ನಾಸಿರ್ ಜಂಗ್ ತೊಣ್ಣೂರಿನಲ್ಲಿದ್ದಾಗ ಈ ಕೆರೆಗೆ ಮೋತಿ ತಲಾಬ್ ಎಂದು ಹೆಸರಿಟ್ಟನಂತೆ.  ಈ ಊರಿನಲ್ಲಿ ಶಾಹ ಸಲಾ ಮಸೂದ್ ಘಾಸಿಯ ದರ್ಗವೊಂದಿದೆ.  ಅದನ್ನು 1358 ರಲ್ಲಿ ನಿರ್ಮಿಸಲಾಯಿತು.  ಆ ಕಟ್ಟಡದಲ್ಲಿ ದೇವಾಲಯದ ಕಂಬಗಳನ್ನು ಉಪಯೋಗಿಸಿರುವುದನ್ನು ಕಾಣಬಹುದು.
                                                                      (ಎಂ. ಹೆಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ